ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಸಂಬಂಧಿಸಿದ ಜಾಗದಲ್ಲಿ ಅಂಗನವಾಡಿಗೆ ಸುತ್ತುಗೋಡೆ ಕಟ್ಟುವ ವಿಷಯದಲ್ಲಿ ವಿವಾದ ಇದೀಗ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದೆ. ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ವೇಳೆ ಪೊಲೀಸರು ಶಾಂತಗೊಳಿಸಿದ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಒಟ್ಟು 2.70 ಎಕರೆ ವಿಸ್ತೀರ್ಣದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಒತ್ತುವರಿ ತೆರವುಗೊಳಿಸಿ, ಆವರಣ ಗೋಡೆ ನಿರ್ಮಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿದ್ದರೂ, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದೆ ಮಂಜೇಶ್ವರ ಗ್ರಾಮ ಪಂಚಾಯತ್ ಕಾಮಗಾರಿಗೆ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿನ್ನೆ ಬೆಳಗ್ಗೆ ಅಂಗನವಾಡಿಯ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಪೊಲೀಸ್ ಭದ್ರತೆಯೊಂದಿಗೆ ಸಿದ್ಧತೆ ನಡೆಸಲಾಗಿತ್ತು. ಈ ಸಂಬಂಧ ಮಂಜೇಶ್ವರ ಗ್ರಾಮ ಪಂಚಾಯತ್ ಸಮಿತಿಯು ಪೊಲೀಸ್ ಠಾಣೆಗೆ ಲಿಖಿತವಾಗಿ ನೀಡಿದ್ದ ದಾಖಲೆಯ ಆಧಾರದ ಮೇಲೆ ಕಾಮಗಾರಿ ಆರಂಭಿಸಲು ಮುಂದಾಗಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಉದ್ಯಾವರ ಮಾಡ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ (ರಿ.) ಇದರ ಸದಸ್ಯರು ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭದಲ್ಲಿ ರುದ್ರಭೂಮಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಿ, ನ್ಯಾಯಾಲಯದ ನಿರ್ದೇಶನಗಳಿರುವಾಗ ಕಾಮಗಾರಿ ನಡೆಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರುದ್ರ ಭೂಮಿ ಸಮಿತಿಯ ಮನವಿಯ ಹಿನ್ನೆಲೆಯಲ್ಲಿ ಪೊಲೀಸರು ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಈ ಸಂದರ್ಭ ಕೆಲವು ಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರ ಮಧ್ಯಸ್ಥಿಕೆಯಿಂದ ಪ್ರಕರಣ ಶಾಂತವಾಯಿತು. ಇದೀಗ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಅಂಗನವಾಡಿ ಸುತ್ತಮುತ್ತಲಿನವರು ಅಂಗನವಾಡಿ ಸುರಕ್ಷತೆಗೆ ನ್ಯಾಯ ಒದಗಿಸುವಂತೆ ನ್ಯಾಯಕ್ಕಾಗಿ ಧರಣಿ ನಡೆಸುತಿದ್ದಾರೆ. ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಪ್ರತ್ಯೇಕವಾಗಿರುವ ಸ್ಥಳದಲ್ಲಿ ಹಲವು ವರ್ಷಗಳಿಂದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ದರ್ಶನ ಪಾತ್ರಿಗಳ ಹಾಗೂ ಕ್ಷೇತ್ರ ಪ್ರಧಾನರನ್ನು ದಫನ ಮಾಡಿದಂತಹ ಜಾಗದಲ್ಲಿ ಸುಮಾರು 10/15 ರಷ್ಟು ಗೋರಿ ನಿರ್ಮಿಸಿದ್ದು, ಕೆಲವು ತಿಂಗಳ ಹಿಂದೆ ಮಂಜೇಶ್ವರ ಗ್ರಾಮ ಪಂಚಾಯತ್ ಹಾವು ಸೇರಿದಂತೆ ವಿಷ ಜಂತುಗಳ ಹಾವಳಿ ಇದೆ ಎಂಬ ನೆಪದಲ್ಲಿ ಜೆಸಿಬಿ ಮೂಲಕ ಗೋರಿಗಳನ್ನು ನೆಲಸಂಗೊಳಿಸಿದ್ದರು. ಇದರಿಂದಾಗಿ ಅಂದಿನಿಂದ ಊರಿನ ಜನತೆ ಆಕ್ರೋಶಗೊಂಡಿದ್ದರು. ಇದರ ಜತೆಗೆ
ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ
ಮೃತದೇಹಗಳ ಅಂತ್ಯಸಂಸ್ಕಾರ ಹಾಗೂ ದಹನ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಸ್ಥಳೀಯರಿಂದ ನಿರಂತರ ಅಡ್ಡಿ, ಆತಂಕ ಮತ್ತು ಕಿರುಕುಳ ಎದುರಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಈ ಸಂಬಂಧ WP(C) No. 22626/2022 ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಮಿತಿ ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು, 2.70 ಎಕರೆ ವಿಸ್ತೀರ್ಣದ ರುದ್ರಭೂಮಿ ಜಾಗದಲ್ಲಿರುವ ಒತ್ತುವರಿಗಳನ್ನು ತೆರವುಗೊಳಿಸಿ, ಆಸ್ತಿಯ ರಕ್ಷಣೆಗೆ ಸೂಕ್ತ ಆವರಣ ಗೋಡೆ ನಿರ್ಮಿಸುವಂತೆ ಸಂಬಂಧಪಟ್ಟ ಪಂಚಾಯತ್‌ಗೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು 2025ರ ಆಗಸ್ಟ್ 25 ರಂದು ಪಂಚಾಯತ್‌ಗೆ ನೀಡಲಾಗಿದೆ ಎಂದು ರುದ್ರಭೂಮಿ ಸಮಿತಿ ತಿಳಿಸಿದೆ.