ಮಂಜೇಶ್ವರ: ಕುವೈಟ್‌ನಲ್ಲಿ ಇತ್ತೀಚೆಗೆ ನಿಧನರಾದ ಕಟ್ಟೆ ಬಜಾರ್ ನಿವಾಸಿ ಕಿರಣ್ ರಾಜ್ ಅವರ ಪಾರ್ಥಿವ ಶರೀರವು ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಆಗಮಿಸಿದ್ದು, ಇಂದು ಬೆಳಗ್ಗೆ ಸ್ವ-ಗೃಹಕ್ಕೆ ತರಲಾಯಿತು. ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಮೃತರ ಅಂತ್ಯಕ್ರಿಯೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ರಮತ್ತ ಮಜಾಲಿನ ಸಾರ್ವಜನಿಕ ರುದ್ರ ಭೂಮಿಯಲ್ಲಿ ನೆರವೇರುವುದರೊಂದಿಗೆ ಕಿರಣ್ ರಾಜ್ ಪಂಚಭೂತಗಳಲ್ಲಿ ಲೀನರಾದರು. ಪಾರ್ಥಿವ ಶರೀರವು ಇಂದು ಬೆಳಗ್ಗೆ ಕಟ್ಟೆ ಬಜಾರ್‌ನ ಮನೆಗೆ ತಲುಪುತ್ತಿದ್ದಂತೆಯೇ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿರಣ್ ರಾಜ್ ಅವರು ಕುವೈಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರಾದ ಕುವೈಟ್ ಕೈತನ್ ನ ಪಾನ್ ಗ್ಲೋಬಲ್ ಕಂಪೆನಿಯ ಮಾಲಕ: ಲಾರೆನ್ಸ್ ಡಿ ಸೋಜಾ, ಪತ್ನಿ: ರೀಡಾ ಸಾಲ್ದಾನ ಅವರು ಸ್ವತಃ ಕಟ್ಟೆ ಬಜಾರ್‌ನ ನಿವಾಸಕ್ಕೆ ಆಗಮಿಸಿ, ಅಗಲಿದ ತಮ್ಮ ಉದ್ಯೋಗಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು. ಅಲ್ಲದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ವೇಳೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಷೀರ್ ಕನಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ರೈ ಪರಂಕೀಲ, ಮಂಡಲ ಅಧ್ಯಕ್ಷ; ಆದರ್ಶ ಬಿ.ಎಂ, ಯಾದವ ಬಡಾಜೆ, ಮೀಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲ್, ಕನಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್ ಪಾವೂರು, ಸೇರಿದಂತೆ
ಕಟ್ಟೆ ಬಜಾರ್ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಸ್ನೇಹಿತರು ಮನೆಗೆ ಭೇಟಿ ನೀಡಿ ಕಂಬನಿಯ ವಿದಾಯ ಸಲ್ಲಿಸಿದರು. ಕುವೈಟ್‌ನಿಂದ ಮೃತದೇಹವನ್ನು ತಾಯ್ನಾಡಿಗೆ ತರುವಲ್ಲಿ ಅಲ್ಲಿನ ಭಾರತೀಯ ರಾಯಭಾರ ಕಚೇರಿ, ಉದ್ಯೋಗ ಸಂಸ್ಥೆ ಹಾಗೂ ವಿವಿಧ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು ಪದಾಧಿಕಾರಿಗಳು ವಿಶೇಷ ಶ್ರಮ ವಹಿಸಿದ್ದರು.