ಹೊಸಂಗಡಿ ಚೆಕ್ಪೋಸ್ಟ್ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ನೂತನ ಯೋಜನಾ ಕಚೇರಿ ಉದ್ಘಾಟನೆ.
ಅಕ್ಟೋಬರ್ 21, 2023
0
ಹೊಸಂಗಡಿ ಚೆಕ್ಪೋಸ್ಟ್ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ನೂತನ ಯೋಜನಾ ಕಚೇರಿ ಉದ್ಘಾಟನೆ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ನೂತನ ಯೋಜನಾ ಕಚೇರಿಯನ್ನು ಹೊಸಂಗಡಿ ಬಳಿಯ ಚೆಕ್ಪೋಸ್ಟ್ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಎಚ್ ಮಂಜುನಾಥ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರದ ಯೋಜನೆಯಿಂದ ಪಾಲುದಾರ ಕುಟುಂಬಗಳಿಗೆ ಸಿಗುವ ಸವಲತ್ತುಗಳ ಬಗ್ಗೆ, ಬ್ಯಾಂಕಿನಿಂದ ಸಿಗುವ ಆರ್ಥಿಕ ನೆರವಿನ ಬಗ್ಗೆ ತಿಳಿಸಿ, ಕಾಸರಗೋಡು ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಂದ ಉತ್ತಮ ಸಹಕಾರ ಸ್ಪಂದನೆ ಸಿಗುತ್ತಿದ್ದು, ಈ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮತ್ತು ಗ್ರಾಮಾಭಿವೃದ್ಧಿ ಯೋಜನೆಯು ಹೊಸ ಯೋಜನಾ ಪ್ರದೇಶ ವೆಲ್ಲರಿಕುಂಡು ತಾಲ್ಲೂಕಿಗೆ ವಿಸ್ತರಣೆಗೊಂಡಿರುವ ಬಗ್ಗೆ ತಿಳಿಸಿದರು. ಕಾಸರಗೋಡು ಸಂಸದರಾದ ರಾಜಮೋಹನ್ ಉಣ್ಣೆತಾನ್ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕೆ.ಎಂ ಅಶ್ರಫ್ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಗ್ಗೆ ತಿಳಿಸಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ ಯೋಜನಾ ಕಚೇರಿ ತೆರೆದ ಬಗ್ಗೆ ಸಂತಸ ವ್ಯಕ್ತಪಡಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುವ ಸಿಡ್ಭಿ ಪ್ರಯಾಸ್ ಯೋಜನೆಯ ಫಲಾನುಭವಿಗಳಿಗೆ ಪ್ರಗತಿನಿಧಿ ವಿತರಣೆ, ಸುಜ್ಞಾನನಿಧಿ ಶಿಷ್ಯವೇತನ ವಿತರಣೆ, ಹಾಗೂ ಅಪಘಾತದಿಂದ ಅನಾರೋಗ್ಯಕ್ಕೀಡಾದ ಕುಟುಂಬಕ್ಕೆ ಕ್ರಿಟಿಕಲ್ ಇಲ್ನೆಸ್ ಫಂಡ್ ವಿತರಣೆ ಮುಂತಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿಸಲಾಯಿತು. ವೇದಿಕೆಯಲ್ಲಿ ಮಂಜೇಶ್ವರ್ SBI ಬ್ಯಾಂಕಿನ ಬ್ರಾಂಚ್ ಮೆನೇಜರ್ ಸಿಲ್ಜೋ ಕೆ.ಮೊನ್ಸಿ , ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ್ ತೊಟ್ಟೆತೋಡಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲ್, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ಭಾಗ್, ಮಂಜೇಶ್ವರ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯಕುಮಾರ್, B.M ರಾಜೇಂದ್ರರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಭಜನಾ ಪರಿಷತ್ ನ ಪದಾಧಿಕಾರಿಗಳು, ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ಘಟಕ ಸದಸ್ಯರು, ಮಂಜೇಶ್ವರ, ಕಾಸರಗೋಡ್, ವೆಲ್ಲರಿಕುಂಡು ತಾಲ್ಲೂಕಿನ ಯೋಜನಾಧಿಕಾರಿಗಳು, ಯೋಜನೆಯ ಎಲ್ಲಾ ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು, VLE ಗಳು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ಸ್ವಾಗತಿಸಿ, ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್ ಧನ್ಯವಾದವಿತ್ತರು. ತಲಪಾಡಿ ವಲಯ ಮೇಲ್ವಿಚಾರಕರಾದ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.






