Breaking Posts

6/trending/recent
Type Here to Get Search Results !

8:10:45

ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ.

ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ.
ಮಂಜೇಶ್ವರ: ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯ ಅನಾವರಣ ಕಾರ್ಯಕ್ರಮವು ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು. ಬಡಾಜೆ ಬೀಡು ಗೋಪಾಲಕೃಷ್ಣ ತಂತ್ರಿಯವರು ತಮ್ಮ ಶುಭಹಸ್ತದಿಂದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿ, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಭಕ್ತಾದಿಗಳು, ಗ್ರಾಮಸ್ಥರು ಹಾಗೂ ಊರ ಪರವೂರಿನ ಎಲ್ಲರೂ ಸಕ್ರಿಯವಾಗಿ ಕೈಜೋಡಿಸುವಂತೆ ಕರೆ ನೀಡಿದರು. ಈ ಪುಣ್ಯ ಕಾರ್ಯಕ್ಕೆ ಬೇಕಾದ ಆರ್ಥಿಕ ಸಂಪತ್ತು ಹಾಗೂ ಸಮಸ್ತ ಸೌಲಭ್ಯಗಳನ್ನು ಶ್ರೀ ದೇವರು ಅನುಗ್ರಹಿಸುತ್ತಾನೆ ಎಂದು ಹಾರೈಸಿ, ಎಲ್ಲರಿಗೂ ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಲರಾಮ ಭಟ್ ಕಾಕುಂಜೆ ಅವರು ದೇವಸ್ಥಾನದಲ್ಲಿ ಇದುವರೆಗೆ ನಡೆದಿರುವ ಜೀರ್ಣೋದ್ಧಾರ ಕಾರ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ, ಮುಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಭಕ್ತಾದಿಗಳು ತನು-ಮನ-ಧನದ ಸಹಕಾರ ನೀಡುವಂತೆ ವಿನಂತಿಸಿದರು. ದೇವಸ್ಥಾನದ ಮೊಕ್ತೇಸರರಾದ ಶೈಲೇಶ್ ಎಸ್. ಸ್ಪೂರ್ತಿನಗರ ಅವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಹಾಗೂ ಭಕ್ತಾದಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ಬಡಾಜೆ ಅವರು ಮಾತನಾಡಿ, ಬ್ರಹ್ಮಕಲಶೋತ್ಸವವನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿಸಲು ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮಿಂದಾದ ಸೇವೆ ಹಾಗೂ ಸಹಕಾರವನ್ನು ನೀಡುವಂತೆ ವಿನಂತಿಸಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ಚಂದ್ರಮೋಹನ್ ಹೊಳ್ಳ, ಪ್ರಧಾನ ಸಂಚಾಲಕ ಹರೀಶ್ ಶೆಟ್ಟಿ ಮಾಡ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಂಕರ ಪಡುಬೈಲು, ದೇವಸ್ಥಾನದ ಮೊಕ್ತೇಸರರಾದ ರಾಮಚಂದ್ರ ಸುರಿಬೈಲು, ಸುಕೇಶ್ ಆಳ್ವ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಲೋಹಿತ್ ಸ್ಪೂರ್ತಿನಗರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. 2027 ರ ಜನವರಿ 6 ರಿಂದ 17 ರವರೆಗೆ ನಡೆಯಲಿರುವ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ, ದೇವತಾ ಕಾರ್ಯದಲ್ಲಿ ಭಾಗಿಗಳಾಗಬೇಕೆಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.