Breaking Posts

6/trending/recent
Type Here to Get Search Results !

8:10:45

ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಯಕ್ಷಗಾನ ಕಲಾವಿದರ ಬದುಕು ಪರಿವರ್ತನೆ: ಡಿವೈಎಸ್‌ಪಿ ದಿನಕರ ಶೆಟ್ಟಿ ಪಡ್ರೆ

ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಯಕ್ಷಗಾನ ಕಲಾವಿದರ ಬದುಕು ಪರಿವರ್ತನೆ: ಡಿವೈಎಸ್‌ಪಿ ದಿನಕರ ಶೆಟ್ಟಿ ಪಡ್ರೆ

ಸುರತ್ಕಲ್: ಯಕ್ಷಗಾನ ಕಲಾವಿದರ ಬದುಕಿನಲ್ಲಿ ಮಹತ್ತರ ಬದಲಾವಣೆಯನ್ನು ತಂದಿರುವುದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂದು ಡಿವೈಎಸ್‌ಪಿ ಹಾಗೂ ಪಡ್ರೆ ಧೂಮಾವತಿ ದೈವಸ್ಥಾನದ ಅಧ್ಯಕ್ಷ ದಿನಕರ ಶೆಟ್ಟಿ ಪಡ್ರೆ ಹೇಳಿದರು.
ಸುರತ್ಕಲ್ ಬಂಟರ ಸಂಘದ ಆವರಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸುರತ್ಕಲ್ ಘಟಕದ ಷಷ್ಟಮ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಯಕ್ಷಗಾನ ಕಲಾವಿದರ ಜೀವನ ಸಂಕಷ್ಟಗಳಿಂದ ಕೂಡಿತ್ತು. ರಂಗಸ್ಥಳದಲ್ಲಿ ದೇವರ ಪಾತ್ರ ನಿರ್ವಹಿಸಿದ ಕಲಾವಿದರು ವೇಷ ಕಳಚಿದ ನಂತರ ಅವರ ನೈಜ ಜೀವನ ಕಷ್ಟಕರವಾಗಿತ್ತು. ಆದರೆ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಯತ್ನದಿಂದ ಸ್ಥಾಪಿತವಾದ ಫೌಂಡೇಶನ್ ಟ್ರಸ್ಟ್ ಕಲಾವಿದರ ಬದುಕನ್ನು ಉತ್ತಮಗೊಳಿಸಿದೆ ಎಂದರು.
ಟ್ರಸ್ಟ್ ಕಲಾಸೇವೆಯೊಂದಿಗೆ ಯಕ್ಷಗಾನ, ನಾಟಕ, ದೈವರಾಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ. ಪಟ್ಲ ಸತೀಶ್ ಶೆಟ್ಟಿ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳಾ ರಮಾನಂದ ಭಟ್ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕಲಾವಿದರ ಸಂಕಷ್ಟ ಕಂಡು ಟ್ರಸ್ಟ್ ಸ್ಥಾಪಿಸಲಾಗಿದೆ. ಇಂದು ಅದು ವಿಶ್ವಮಾನ್ಯತೆ ಪಡೆದು ಯಕ್ಷಗಾನದ ಕೀರ್ತಿಯನ್ನು ಜಗತ್ತಿನ ವಿವಿಧ ಭಾಗಗಳಿಗೆ ಪಸರಿಸುತ್ತಿದೆ ಎಂದರು. ಸುರತ್ಕಲ್ ಘಟಕವು ಟ್ರಸ್ಟ್‌ನ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮದ್ದಳೆಗಾರ ಜಯರಾಮ ಆಚಾರ್ಯ ಚೇಳಾರ್, ಗಿರೀಶ್ ನಾವಡ ಹಾಗೂ ಪೂರ್ಣಿಮಾ ಯತೀಶ್ ರೈ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಸಿ.ಎ. ಸುನೀಲ್ ಭಂಡಾರಿ, ಸುರತ್ಕಲ್ ಯಕ್ಷಮಿತ್ರರು ಸಂಸ್ಥೆಯ ಅಧ್ಯಕ್ಷ ಕೆ ರಾಜೇಶ್ ಕುಮಾರ್ ಮುಂಚೂರು, ಮನಪಾ ಮಾಜಿ ಸದಸ್ಯ ಪ್ರಶಾಂತ್ ಮೂಡಾಯಿಕೊಡಿ, ಕೇಸರಿ ಮನೋಹರ್ ಶೆಟ್ಟಿ ಸೂರಿಂಜೆ, ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದ ಅಧ್ಯಕ್ಷ ರವಿರಾಜ್ ಸುವರ್ಣ, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮುಂಬೈ ಸಂಚಾಲಕ ಕರ್ನೂರು ಮೋಹನ್ ರೈ, ಬಾಳ ಜಗನ್ನಾಥ ಶೆಟ್ಟಿ, ಸುರತ್ಕಲ್ ಘಟಕದ ಗೌರವಾಧ್ಯಕ್ಷ ಸುಧಾಕರ ಎಸ್ ಪೂಂಜ, ಅಧ್ಯಕ್ಷ ಲೀಲಾಧರ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಭಟ್ ಎಸ್ ಜಿ, ಸಹನಾ ರಾಜೇಶ್ ರೈ, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳಾರ್, ಕೋಶಾಧಿಕಾರಿ ರಾಜೇಶ್ ಹೊಸಬೆಟ್ಟು, ಸಂಚಾಲಕ ನಾಗರಾಜ ಕಡಂಬೋಡಿ, ಸಹ ಸಂಚಾಲಾಕಿ ಡಾ ಸುಧಾ ಚಂದ್ರಶೇಖರ ಶೆಟ್ಟಿ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು. ಯಕ್ಷಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ನೆರವು ನೀಡಿದ ಸುನೀಲ್ ಭಂಡಾರಿ ಅವರನ್ನು ಪಟ್ಲ ಸತೀಶ್ ಶೆಟ್ಟಿ ಸನ್ಮಾನಿಸಿದರು. ಹೊಸ ಟ್ರಸ್ಟಿಗಳನ್ನು ಕೂಡ ಗೌರವಿಸಲಾಯಿತು.
ಲಾವಣ್ಯ ಶೆಟ್ಟಿ ಚೇಳಾರ್ ಪ್ರಾರ್ಥಿಸಿದರು. ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಗಂಗಾಧರ ಪೂಜಾರಿ ವಂದಿಸಿದರು. ಡಾ. ಸುಧಾ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಬಳಿಕ ಪಾವಂಜೆ ಮೇಳದಿಂದ ‘ಅಂಬಾ ಶಪಥ–ಗದಾಯುದ್ಧ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.