ಸ್ವಂತ ಪುತ್ರಿಯನ್ನು ಇರಿದು ಕೊಲೆಗೈದ ತಂದೆ.
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಸ್ವಂತ ಪುತ್ರಿಯನ್ನು ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಕುಂಜತ್ತೂರು ಹಿಲ್ ಟಾಪ್ ನಿವಾಸಿ ಜುಮೈಲ (18) ಮೃತಪಟ್ಟ ಯುವತಿ. ಇಂದು (ಸೋಮವಾರ) ಸಾಯಂಕಾಲ 6 ಗಂಟೆಯ ವೇಳೆ ಈ ದಾರುಣ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ತಂದೆ ಈ ಕೃತ್ಯವನ್ನು ಮಾಡಿರುವುದಾಗಿ ಪೊಲೀಸರು ತಿಳಿಸುತ್ತಿದ್ದಾರೆ. ಸಂಜೆ ಯುವತಿಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ನೋಡಿದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಕೂಡಲೇ ಜುಮೈಲಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿರುವುದು ದೃಢಪಡಿಸಲಾಯಿತು. ಘಟನೆ ನಡೆದಾಗ ಜುಮೈಲಾ ಅವರ ತಾಯಿ ಕೂಡ ಮನೆಯಲ್ಲಿದ್ದು ನಿಸ್ಸಾಯಕರಾಗಿದ್ದರು. ಅಕ್ಕಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದು ಕೊಲೆಗೆ ನಿಖರ ಕಾರಣ ವ್ಯಕ್ತಪಡಿಸಿಲ್ಲ. ಮೃತದೇಹವನ್ನು ಮಹಜರಿಗೆ ಕೊಂಡೊಯ್ಯಲಾಗಿದೆ.