Breaking Posts

6/trending/recent
Type Here to Get Search Results !

8:10:45

ಕುಂಬಳೆ ಗ್ರಾಮ ಪಂಚಾಯತ್ ನ ವತಿಯಿಂದ ಕೇರಳ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ನಾಳೆಯಿಂದ ಸಂಚಾರ ನಡೆಸಲಿವೆ ಕೆ.ಎಸ್.ಆರ್. ಟಿ.ಸಿ ಬಸ್.

ಕುಂಬಳೆ ಗ್ರಾಮ ಪಂಚಾಯತ್ ನ ವತಿಯಿಂದ ಕೇರಳ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ನಾಳೆಯಿಂದ ಸಂಚಾರ ನಡೆಸಲಿವೆ ಕೆ.ಎಸ್.ಆರ್. ಟಿ.ಸಿ ಬಸ್.
ಕುಂಬಳೆ: ಗ್ರಾಮೀಣ ಪ್ರದೇಶವಾದ ಕುಂಬಳೆ ಗ್ರಾಮ ಪಂಚಾಯತ್ ನ ಒಳ ಪ್ರದೇಶಗಳಲ್ಲಿ ಬಸ್ ಸಂಚಾರವಿಲ್ಲದೇ, ಪ್ರದೇಶ ವಾಸಿಗಳು ಅತ್ತಿಂದಿತ್ತ ತೆರಳಲು ಸಂಕಷ್ಟ ಪಡುತ್ತಿದ್ದು, ಪ್ರಯಾಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಂಗವಾಗಿ ಕುಂಬಳೆ ಗ್ರಾಮ ಪಂಚಾಯತ್ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಸಹಯೋಗದೊಂದಿಗೆ ಕೆ.ಎಸ್.ಆರ್. ಟಿ.ಸಿ ಯ ಗ್ರಾಮ ಸಂಚಾರ ಸಾರಿಗೆ ಸೇವೆಯನ್ನು ಅಕ್ಟೋಬರ್ 6 (ನಾಳೆಯಿಂದ) ಪ್ರಾರಂಭಿಸಲಾಗುವುದು ಎಂದು ಕುಂಬಳೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಸದಸ್ಯರು ನಿನ್ನೆ ಸಂಜೆ ಕುಂಬಳೆ ಪ್ರೆಸ್ ಪೋರಂನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಖಾಸಗಿ ಬಸ್ ಗಳ ಸಂಚಾರವಿಲ್ಲದ ಕುಂಬಳೆ ಗ್ರಾಮದ ಕೆಲವು ಕಡೆಗಳಲ್ಲಿ "ಗ್ರಾಮ ಸಾರಿಗೆ ಸೇವೆ" ಎಂಬ ಯೋಜನೆಯಡಿ ಗ್ರಾಮ ಪಂಚಾಯತ್ ಮತ್ತು ಕೇರಳ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ. ಈ ಸಾರಿಗೆ ಬಸ್ ಸಂಚಾರವು ಅಕ್ಟೋಬರ್ 6 ನಾಳೆ ಬೆಳಗ್ಗೆಯಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಂಬ್ರಾಣದಲ್ಲಿ ನಡೆಯುವ ಸಮಾರಂಭದಲ್ಲಿ ಕೇರಳ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜುರವರು ಧ್ವಜಾರೋಹಣ ನೆರವೇರಿಸಿ, ಪತಾಕೆಯನ್ನು ಹಾರಿಸುವ ಮೂಲಕ ಗ್ರಾಮ ಸಂಚಾರ ಸಾರಿಗೆಗೆ ಚಾಲನೆ ನೀಡಲಿರುವರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಈ ವೇಳೆ ವಿವಿಧ ಗಣ್ಯರು ಉಪಸ್ಥಿತರಿರುವರು.
ಈ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಕುಂಬಳೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಯು.ಪಿ.ತಾಹಿರಾ ಯೂಸುಫ್ ಮಾತನಾಡಿ, ಪ್ರಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯ, ಹಳ್ಳಿಗಾಡಿನ ಗ್ರಾಮೀಣ ಪ್ರದೇಶವಾದ ಕುಂಬಳೆಯಲ್ಲಿ ಈ ಯೋಜನೆ ಜ್ಯಾರಿಗೊಳ್ಳುತ್ತಿದ್ದು, ಇದು ಕುಂಬಳೆ ಗ್ರಾಮ ಪಂಚಾಯತ್ ನ ವತಿಯಿಂದ ಗ್ರಾಮೀಣ ಪ್ರದೇಶದ ಜನತೆಗೆ ನೀಡುವ ಮಹತ್ತರ ಕೊಡುಗೆಯಾಗಿದೆ ಹಾಗೂ ಮೊದಲ ಪ್ರಯೋಗವಾಗಿದೆ ಎಂದರು. ಈ ಯೋಜನೆಗೆ ಪಂಚಾಯತ್ ನ 2023 - 2024 ರ ವಾರ್ಷಿಕ ಯೋಜನೆಯಲ್ಲಿ 15 ಲಕ್ಷಗಳನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಜಿಲ್ಲಾ ಯೋಜನಾ ಸಮಿತಿಯು ಅನುಮತಿ ನೀಡಿದೆ. ಕೆ.ಎಸ್.ಆರ್. ಟಿ. ಸಿ ಬಸ್ ಸಂಚಾರದ ಇಂಧನ ವೆಚ್ಚ, ಬಸ್ ಸಿಬ್ಬಂದಿಗಳ ವೇತನ ಮತ್ತು ಇತರ ದುರಸ್ಥಿ ಖರ್ಚುಗಳನ್ನು ಕುಂಬಳೆ ಗ್ರಾಮ ಪಂಚಾಯತ್ ಭರಿಸಲಿದೆ. ಟಿಕೆಟ್ ಮೊತ್ತವನ್ನು ಸಂಪೂರ್ಣವಾಗಿ ಕೆ.ಎಸ್.ಆರ್.ಟಿ.ಸಿ. ಪಾವತಿಸುತ್ತದೆ.
ಈ ಬಸ್ ಕುಂಬಳೆ ಪಿ.ಕೆ. ನಗರ, ಉಳುವಾರು, ಪಾಂಬಾಟ್ಟಿ, ಕುಂಬಳೆ ಸರ್ಕಾರಿ ಆಸ್ಪತ್ರೆ, ಐ.ಎಚ್.ಆರ್.ಡಿ.ಕಾಲೇಜು, ಪೇರಾಲು, ಮೊಗ್ರಾಲ್ ಶಾಲೆ ಮತ್ತು ಮುಳಿಯಡ್ಕ ಮಾರ್ಗಗಳಲ್ಲಿ ಸಂಚರಿಸಲಿದೆ ಎಂದು ಅಧ್ಯಕ್ಷೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.