"ಸಂಸ್ಕಾರ ಉಳಿದರೆ ಸಮಾಜ ಉಳಿಯುತ್ತದೆ" – ಚಾತುರ್ಮಾಸ್ಯ ಸಂಕಲ್ಪ ಯಾತ್ರೆಯಲ್ಲಿ ಜಗದ್ಗುರುಗಳ ಸಂದೇಶ.
ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22 ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ 2026 ರ ಜುಲೈ 29 ರಿಂದ ಸೆಪ್ಟೆಂಬರ್ 26 ರವರೆಗೆ ಪಡುಕುತ್ಯಾರಿನ ಶ್ರೀಮಠದಲ್ಲಿ ವೈಭವದಿಂದ ನಡೆಯಲಿದ್ದು, ಅದರ ಅಂಗವಾಗಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ನಿನ್ನೆ ಕೇರಳ ಪ್ರವೇಶಿಸಿತು. ಜೂನ್ 18 ರಂದು ಆರಂಭಗೊಂಡ ಸಂಕಲ್ಪ ಯಾತ್ರೆಯ ಭಾಗವಾಗಿ ಜಗದ್ಗುರುಗಳು ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ, ಆರಿಕ್ಕಾಡಿಯ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಕಾಞಂಗಾಡಿನ ಅಜಾನೂರು ಶ್ರೀಮದ್ ಪರಶಿವ ವಿಶ್ವಕರ್ಮ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದು, ಯಾತ್ರೆಯ ಸಮಾರೋಪವಾಗಿ ಮಧೂರಿನ ಶ್ರೀ ಕಾಳಿಕಾಂಬಾ ಮಠಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಆನೆಗುಂದಿ ಮಠದ ಪ್ರತಿಷ್ಠಾನದ ವತಿಯಿಂದ ಮಧೂರು ಶ್ರೀ ಕಾಳಿಕಾಂಬಾ ಮಠದ ಪದಾಧಿಕಾರಿಗಳಿಗೆ ಚಾತುರ್ಮಾಸ್ಯ ಮಹೋತ್ಸವದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಗೌರವಪೂರ್ವಕವಾಗಿ ಹಸ್ತಾಂತರಿಸಲಾಯಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಮಠದ ಅಧ್ಯಕ್ಷ ಎಂ. ಪುರುಷೋತ್ತಮ ಆಚಾರ್ಯ ವಹಿಸಿದ್ದು, ಜಗದ್ಗುರುಗಳ ಪ್ರಧಾನ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
"ಸಂಸ್ಕಾರವೇ ಸಮಾಜದ ಶಕ್ತಿ" – ಜಗದ್ಗುರುಗಳ ಆಶೀರ್ವಚನ.
ಭಕ್ತರನ್ನು ಆಶೀರ್ವದಿಸಿ ಮಾತನಾಡಿದ ಜಗದ್ಗುರುಗಳು, "ವಿವಿಧ ನಾಮರೂಪಗಳಲ್ಲಿ ಭಕ್ತರ ಕೋರಿಕೆಗಳನ್ನು ಈಡೇರಿಸುವ ಆದಿಶಕ್ತಿ ಮಹಾತಾಯಿ ಇಲ್ಲಿ ಕಾಳಿಕಾಂಬೆಯಾಗಿ ನೆಲೆಸಿದ್ದಾಳೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ಪರಂಪರೆಯನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಗೂ ತಿಳಿಸಬೇಕು. ಸಂಸ್ಕಾರಯುತ ಪೀಳಿಗೆ ನಿರ್ಮಾಣವಾದಾಗ ಮಾತ್ರ ಸಮಾಜ ಸುಭದ್ರವಾಗುತ್ತದೆ" ಎಂದು ಹೇಳಿದರು.
"ಇತರರಿಗೆ ಒಳಿತನ್ನು ಬಯಸುವ ಮನೋಭಾವ, ನಯ-ವಿನಯ ಮತ್ತು ಪರಸ್ಪರ ಗೌರವ ಪ್ರತಿಯೊಬ್ಬರಲ್ಲೂ ಇರಬೇಕು. ಅಹಂಕಾರದಿಂದ ಯಾವುದೇ ಸಾಧನೆಯೂ ಸಾಧ್ಯವಿಲ್ಲ. ಕರ್ಮದ ನಿಯಮ ಅಚಲವಾಗಿದೆ; ನಾವು ಮಾಡುವ ಸತ್ಕಾರ್ಯಗಳು ನಮ್ಮ ಜೀವನವನ್ನೂ ಸಮಾಜವನ್ನೂ ಉಜ್ವಲಗೊಳಿಸುತ್ತವೆ" ಎಂದು ಜಗದ್ಗುರುಗಳು ಸಂದೇಶ ನೀಡಿದರು.
ಮುಂದಿನ ದಿನಗಳಲ್ಲಿ ಮಹಾಸಂಸ್ಥಾನದಲ್ಲಿ ಸಹಸ್ರ ಚಂಡಿಕಾಯಾಗ ಆಯೋಜಿಸುವ ಯೋಜನೆ ಇರುವುದಾಗಿ ತಿಳಿಸಿದ ಅವರು, ಬಾಲ ಸರಸ್ವತಿ ಹೋಮಗಳ ಮೂಲಕ ಬಾಲಕ-ಬಾಲಕಿಯರಲ್ಲಿ ಧರ್ಮ, ಸಂಸ್ಕೃತಿ ಹಾಗೂ ಸಮಾಜ ಪರಂಪರೆಯ ಅರಿವು ಮೂಡಿಸಲು ದೇವಾಲಯಗಳು ಮುಂದಾಗಬೇಕೆಂದು ಕರೆ ನೀಡಿದರು. ಅಲ್ಲದೆ, ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಮಠದಲ್ಲಿ ನಡೆಯುವ ಎಲ್ಲಾ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ಸಭೆಯಲ್ಲಿ ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ ಆಚಾರ್ಯ ಕೆಮ್ಮಣ್ಣು, ಹರೀಶ್ ಆಚಾರ್ಯ ಹರೇಕಳ, ಜನಾರ್ದನ ಆಚಾರ್ಯ ಬಜಕೂಡ್ಲು, ಉಮೇಶ್ ಆಚಾರ್ಯ ಪುತ್ತೂರು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ನೀರ್ಚಾಲು ಪರಮೇಶ್ವರ ಆಚಾರ್ಯ, ಕೆ.ಎಂ. ಮಧುಸೂದನ ಆಚಾರ್ಯ ಪೆರ್ಣೆ, ಭರತ್ ಆರ್. ಆಚಾರ್ಯ, ನಿರಂಜನ ಆಚಾರ್ಯ ಅಮೈ, ಸುಂದರ ಆಚಾರ್ಯ ಬದಿಯಡ್ಕ, ದೇವದಾಸ ಆಚಾರ್ಯ ದೇಶಮಂಗಲ, ಶೀತಲ್ ಎಸ್. ಆಚಾರ್ಯ, ಲವ ಕೊಲ್ಲಂಗಾನ, ಸತೀಶ್ ಆಚಾರ್ಯ ಪ್ರತಾಪನಗರ, ತುಕಾರಾಮ ಆಚಾರ್ಯ ಕೆರೆಮನೆ, ಮೌನೇಶ್ ಆಚಾರ್ಯ ಜೆ.ಪಿ.ನಗರ, ಸಚಿನ್ ಬೋವಿಕ್ಕಾನ, ವರಪ್ರಸಾದ್ ಕಂಬಾರು, ಜ್ಯೋತಿಷಿ ಜನಾರ್ದನ ಆಚಾರ್ಯ ಮವ್ವಾರು,ವೆಂಕಟರಮಣ ಆಚಾರ್ಯ ಮೀಪುಗುರಿ ರಾಜೇಶ್ ಆಚಾರ್ಯ ಮನ್ನಿಪಾಡಿ ನಾಗೇಶ್ ಆಚಾರ್ಯ ಪುತ್ತಿಗೆ ನಾಗೇಶ್ ಆಚಾರ್ಯ ಸೀತಾಂಗೋಳಿ
ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಮಠದ ಉಪಾಧ್ಯಕ್ಷ ಕೆ. ಜಗದೀಶ ಆಚಾರ್ಯ ಕಂಬಾರು ಸ್ವಾಗತಿಸಿದರು. ಪುರುಷೋತ್ತಮ ಆಚಾರ್ಯ ಬದಿಯಡ್ಕ ವಂದಿಸಿದರು. ಬಾಲಕೃಷ್ಣ ಆಚಾರ್ಯ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀಗಳವರನ್ನು ಪುರೋಹಿತ್ ವಾಸುದೇವ ಆಚಾರ್ಯ ಅವರ ನೇತೃತ್ವದಲ್ಲಿ ಪೂರ್ಣಕುಂಭದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ನಾಗಧರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ಮೊಳಗಿಸಿದರೆ, ಶ್ರೀಮಠದ ಆಡಳಿತ ಸಮಿತಿ, ಶ್ರೀ ಕಾಳಿಕಾಂಬಾ ಮಹಿಳಾ ವೃಂದ, ಯುವಕ ಸಂಘ, ಭಜನಾ ಸಂಘ ಹಾಗೂ ಅಪಾರ ಸಂಖ್ಯೆಯ ಭಕ್ತವೃಂದದ ಉಪಸ್ಥಿತಿಯಿಂದ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು. ಚಾತುರ್ಮಾಸ್ಯವು ಕೇವಲ ವ್ರತಾಚರಣೆಯಲ್ಲ; ಧರ್ಮ, ಸಂಸ್ಕೃತಿ, ಸೇವೆ ಮತ್ತು ಆತ್ಮೋನ್ನತಿಯ ಮಹಾಪರ್ವ. ಆ ಮಹಾಪರ್ವದತ್ತ ಭಕ್ತಸಮುದಾಯವನ್ನು ಆಹ್ವಾನಿಸುವ ಸಂಕಲ್ಪ ಯಾತ್ರೆ ಕೇರಳದಲ್ಲಿ ಭಕ್ತಿಭಾವದ ಹೊಸ ಸಂಚಲನ ಮೂಡಿಸಿದೆ.