ಹೊಸ ಉದ್ಯೋಗ ಖಾತರಿ ಯೋಜನೆಯ ಪಾಠಗಳನ್ನು ಅಧ್ಯಯನ ಮಾಡಲು ಜನಪ್ರತಿನಿಧಿಗಳಿಗಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್ ನಲ್ಲಿ ತರಬೇತಿ.
ಮಂಜೇಶ್ವರ: ಹೊಸ ಉದ್ಯೋಗ ಖಾತರಿ ಯೋಜನೆಯ ಪಾಠಗಳನ್ನು ಅಧ್ಯಯನ ಮಾಡಲು ಜನಪ್ರತಿನಿಧಿಗಳಿಗಾಗಿ ಮಂಜೇಶ್ವರ ಬ್ಲೋಕ್ ನಲ್ಲಿ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಉದ್ಘಾಟಿಸಿದರು. ಕೇಂದ್ರ ಸರ್ಕಾರವು ಜುಲೈ 1 ರಿಂದ ಜಾರಿಗೆ ತಂದಿರುವ ಹೊಸ ಉದ್ಯೋಗ ಖಾತರಿ ಯೋಜನೆ VB-G RAM (G) ಅನ್ನು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಪರಿಚಯಿಸಲು ರಾಜ್ಯ ಮಿಷನ್ ವತಿಯಿಂದ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಮೊದಲ ಬ್ಯಾಚ್ ತರಬೇತಿ ಜುಲೈ 16 ರಂದು ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ವರ್ಕಾಡಿ, ಮಂಗಲ್ಪಾಡಿ, ಎಣ್ಮಕಜೆ ಪಂಚಾಯತ್‌ಗಳಿಂದ ಜನಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿದರು. 2005 ರಿಂದ ದೇಶದಲ್ಲಿ ಜಾರಿಗೆ ಇದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA), ಕೋವಿಡ್ ಮಹಾಮಾರಿಯಂತಹ ಕಠಿಣ ಸಂದರ್ಭಗಳಲ್ಲಿಯೂ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಮತ್ತು ಕೂಲಿಯನ್ನು ಖಚಿತಪಡಿಸಿತ್ತು. ಆ ಯೋಜನೆಯನ್ನು ಪರಿಷ್ಕರಿಸಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ರೂಪಿಸಿದೆ. ರಾಷ್ಟ್ರಪಿತರ ಹೆಸರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ಯೋಜನೆಯನ್ನು ಏಕಪಕ್ಷೀಯವಾಗಿ ನಿಲ್ಲಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಸಂಸತ್ತಿನಲ್ಲಿ ಬಿಲ್ ಅಂಗೀಕೃತವಾಗುವುದರೊಂದಿಗೆ 2026 ಜೂನ್ 30 ರಂದು ಆ ಯೋಜನೆಗೆ ಅಂತ್ಯವಾಯಿತು. ಮೊದಲು ಉದ್ಯೋಗ ಖಾತರಿ ಯೋಜನೆಯ ವೆಚ್ಚದ ಬಹುಭಾಗವನ್ನು ಕೇಂದ್ರ ಸರ್ಕಾರವೇ ನೇರವಾಗಿ ಹೊತ್ತಿದ್ದರೆ, ಹೊಸ ಯೋಜನೆಯ ಮೂಲಕ ಒಟ್ಟು ವೆಚ್ಚದ ಸುಮಾರು 40 ಶೇಕಡಾವನ್ನು ರಾಜ್ಯಗಳ ಮೇಲೆ ಹಾಕಲಾಗಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ತರಬೇತಿ ಕಾರ್ಯಕ್ರಮದ ಎರಡನೇ ಬ್ಯಾಚ್ ಜುಲೈ 18 ರಂದು ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ನಡೆಯಲಿದೆ.