Breaking Posts

6/trending/recent
Type Here to Get Search Results !

8:10:45

ಕಾಸರಗೋಡು ಜಿಲ್ಲೆಯಲ್ಲಿ ಅನಧಿಕೃತ ಮಣ್ಣು ಗಣಿಗಾರಿಕೆ: ಆರು ಗ್ರಾಮ ಪಂಚಾಯತ್ ಕಚೇರಿಗಳ ಮೇಲೆ ವಿಜಿಲೆನ್ಸ್ ದಾಳಿ

ಕಾಸರಗೋಡು ಜಿಲ್ಲೆಯಲ್ಲಿ ಅನಧಿಕೃತ ಮಣ್ಣು ಗಣಿಗಾರಿಕೆ: ಆರು ಗ್ರಾಮ ಪಂಚಾಯತ್ ಕಚೇರಿಗಳ ಮೇಲೆ ವಿಜಿಲೆನ್ಸ್ ದಾಳಿ

ಕಾಸರಗೋಡು: ಜಿಲ್ಲೆಯಲ್ಲಿ ಅನಧಿಕೃತ ಮಣ್ಣು ಗಣಿಗಾರಿಕೆ ಹೆಚ್ಚುತ್ತಿರುವ ಹಿನ್ನೆಲೆ ಕುಂಬಳೆ ಸೇರಿದಂತೆ ಆರು ಗ್ರಾಮ ಪಂಚಾಯತ್ ಕಚೇರಿಗಳ ಮೇಲೆ ವಿಜಿಲೆನ್ಸ್ ಇಲಾಖೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದೆ.
ಕುಂಬಳೆ, ಮಡಿಕೈ, ಕಯ್ಯೂರ್, ಚೀಮೇನಿ, ಚೆರುವತ್ತೂರು ಮತ್ತು ಚೆಮ್ನಾಡ್ ಗ್ರಾಮ ಪಂಚಾಯತ್ ಕಚೇರಿಗಳ ಜೊತೆಗೆ ಕಾಸರಗೋಡು ಭೂಗರ್ಭ ಇಲಾಖೆಯ ಜಿಲ್ಲಾ ಕಚೇರಿಯಲ್ಲೂ ದಾಳಿ ನಡೆಸಲಾಯಿತು. ಸ್ಥಳೀಯಾಡಳಿತದಿಂದ ನೀಡಲಾಗಿರುವ ಅನುಮತಿಗಳನ್ನು ದುರುಪಯೋಗಪಡಿಸಿಕೊಂಡು ಅನಧಿಕೃತವಾಗಿ ಮಣ್ಣು ತೆಗೆಯಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ದಾಳಿಯಲ್ಲಿ ಕಟ್ಟಡ ನಿರ್ಮಾಣ ಮುಂತಾದ ಕಾರಣಗಳನ್ನು ನೆಪವನ್ನಾಗಿ ಮಾಡಿಕೊಂಡು ನೀಡಲಾದ ಪರವಾನಿಗೆಗಳ ಕಡತಗಳನ್ನು ಅಧಿಕಾರಿಗಳು ಸವಿಸ್ತಾರವಾಗಿ ಪರಿಶೀಲಿಸಿದರು. ಅನುಮತಿಗಿಂತ ಹೆಚ್ಚು ಪ್ರಮಾಣದಲ್ಲಿ ಮಣ್ಣು ತೆಗೆಯಲಾಗಿರುವ ಅನೇಕ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ನಿಯಮಾನುಸಾರವಾಗಿ ಗ್ರಾಮ ಪಂಚಾಯತ್‌ಗಳು 3,000 ಚದರ ಅಡಿ ವ್ಯಾಪ್ತಿಯೊಳಗೆ ಮಾತ್ರ ಮಣ್ಣು ತೆಗೆಯಲು ಅನುಮತಿ ನೀಡಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಜಿಲ್ಲಾ ಜಿಯೋಲಜಿ ಇಲಾಖೆಯ ಅನುಮತಿ ಅಗತ್ಯವಿದೆ. ಆದರೆ ಈ ನಿಯಮಗಳನ್ನು ಮೀರಿ ವ್ಯಾಪಕವಾಗಿ ಮಣ್ಣು ದರೋಡೆ ನಡೆಯುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿರುವುದಾಗಿ ವಿಜಿಲೆನ್ಸ್‌ಗೆ ಮಾಹಿತಿ ಲಭಿಸಿದೆ.
ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ. ಉಣ್ಣಿಕೃಷ್ಣನ್, ಇನ್ಸ್ಪೆಕ್ಟರ್ ಪಿ. ನಾರಾಯಣನ್ ಹಾಗೂ ಕೋಝಿಕ್ಕೋಡ್ ವಿಜಿಲೆನ್ಸ್ ಎಸ್ಪಿ ಕಚೇರಿಯ ಅಧಿಕಾರಿಗಳ ತಂಡ ದಾಳಿಗೆ ನೇತೃತ್ವ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ವಿಜಿಲೆನ್ಸ್ ನಿರ್ದೇಶಕರಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.