ಕಾಸರಗೋಡು: ಮೊಗ್ರಾಲ್ ಪುತ್ತೂರಿನ ಪುರಾತನ ಹಾಗೂ ಕಾರಣಿಕ ಕ್ಷೇತ್ರವಾದ ದೇಶಮಂಗಲ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆಯು ಜನವರಿ 7 ರಂದು ಹಾಗೂ ವಾರ್ಷಿಕ ಮಹೋತ್ಸವವು ಜನವರಿ 14 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಜನವರಿ 7 ರಂದು ಪ್ರತಿಷ್ಠಾ ದಿನಾಚರಣೆ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ನವಕಾಭಿಷೇಕ ನಡೆಯಲಿದೆ. ಬೆಳಿಗ್ಗೆ 10:00 ಗಂಟೆಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6:15 ಕ್ಕೆ ದೀಪ ಪ್ರತಿಷ್ಠೆಯೊಂದಿಗೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 8:30 ಕ್ಕೆ ವಿಶೇಷ ಕಾರ್ತಿಕ ಪೂಜೆ, ಮಹಾಪೂಜೆ ನಡೆಯಲಿದೆ.
ಜನವರಿ 14 ರಂದು ವಾರ್ಷಿಕ ಮಹೋತ್ಸವ ಮತ್ತು ನೇಮೋತ್ಸವ
ಮಕರ ಸಂಕ್ರಮಣದಂದು ನಡೆಯುವ ವಾರ್ಷಿಕ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹವನ, ನವಕಾಭಿಷೇಕ ಮತ್ತು ಭಜನೆಗಳು ನಡೆಯಲಿವೆ. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6:00 ಗಂಟೆಗೆ: ಶ್ರೀ ಕುಟ್ಟಿಚಾತ ದೈವದ ನೇಮೋತ್ಸವ,
ರಾತ್ರಿ 9:00 ಗಂಟೆಗೆ: ಶ್ರೀ ಪಂಜರ್ಲಿ ದೈವ ಹಾಗೂ ಶ್ರೀ ಧೂಮಾವತಿ ದೈವಗಳ ನೇಮೋತ್ಸವಗಳು ನಡೆಯಲಿವೆ.
ರಾತ್ರಿ 9:00 ಗಂಟೆಗೆ: ಶ್ರೀ ಪಂಜರ್ಲಿ ದೈವ ಹಾಗೂ ಶ್ರೀ ಧೂಮಾವತಿ ದೈವಗಳ ನೇಮೋತ್ಸವಗಳು ನಡೆಯಲಿವೆ.
ಜೀರ್ಣೋದ್ಧಾರಕ್ಕೆ ಸಿದ್ಧತೆ:
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮಕರ ಸಂಕ್ರಮಣದ ಬಳಿಕ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಚರ್ಚಿಸಲು ಜನವರಿ 7 ರಂದು ರಾತ್ರಿ 7:30 ಕ್ಕೆ ವಿಶೇಷ ಸಭೆಯನ್ನು ಕರೆಯಲಾಗಿದೆ.
ಉತ್ಸವದ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ಅಧ್ಯಕ್ಷರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಉಳಿಯ ಮುರಳಿ ಅಸ್ರ, ಅರುಣೇಶ ಕಾರಂತ, ಸಂತೋಷ ಕಾರಂತ, ಹರೀಶ ದೇಶಮಂಗಲ, ಶರತ್ ಕೃಷ್ಣ ಕಾರಂತ, ಸೂರ್ಯ ನಾರಾಯಣ ಕಾರಂತ, ಅರವಿಂದ ಕಾರಂತ, ಸತೀಶ ಕಾರಂತ ಮತ್ತು ಲೋಕೇಶ ಎಂಬಿ ಆಚಾರ್ ಕಂಬಾರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದ ಅರ್ಚಕರಾದ ಸುಬ್ರಮಣ್ಯ ಕಾರಂತ ಸ್ವಾಗತಿಸಿ, ಪ್ರಭಾಕರ ಕಾರಂತ ವಂದಿಸಿದರು.