ಮೀನು ಸಂಸ್ಕರಣಾ ಘಟಕದ ಮಾಲಿನ್ಯ ನೀರು ಹರಿದು ಕಣ್ವತೀರ್ಥ ಗ್ರಾಮದಲ್ಲಿ ಕಲುಷಿತ: ಮಂಜೇಶ್ವರ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಣ್ವತೀರ್ಥ ನಾಗರಿಕರಿಂದ ಸೆ. 15 ರಂದು ಗ್ರಾ. ಪಂ. ಕಚೇರಿಗೆ ಪ್ರತಿಭಟನೆ
ಸೆಪ್ಟೆಂಬರ್ 09, 2025
0
ಮೀನು ಸಂಸ್ಕರಣಾ ಘಟಕದ ಮಾಲಿನ್ಯ ನೀರು ಹರಿದು ಕಣ್ವತೀರ್ಥ ಗ್ರಾಮದಲ್ಲಿ ಕಲುಷಿತ: ಮಂಜೇಶ್ವರ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಣ್ವತೀರ್ಥ ನಾಗರಿಕರಿಂದ ಸೆ. 15 ರಂದು ಗ್ರಾ. ಪಂ. ಕಚೇರಿಗೆ ಪ್ರತಿಭಟನೆ.
ಮಂಜೇಶ್ವರ: ಕೇರಳ - ಕರ್ನಾಟಕ ಗಡಿಭಾಗವಾದ ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ ಕಣ್ವತೀರ್ಥ ಪರಿಸರದ ನಾಗರಿಕರ ಬದುಕನ್ನು ಗಂಭೀರ ಪರಿಸರ ಮಾಲಿನ್ಯ ಸಮಸ್ಯೆಗಳೊಂದಿಗೆ ಕಾಡುತ್ತಿರುವ, ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯುನೈಟೆಡ್ ಸೀಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಘಟಕದ ವಿರುದ್ಧ ನಾಗರಿಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಸೆ. 15 ರಂದು ಮಂಜೇಶ್ವರ ಗ್ರಾ. ಪಂ ಎದುರು ಕಣ್ವತೀರ್ಥದ ಜಲ - ವಾಯು ಮಾಲಿನ್ಯದ ವಿರುದ್ಧ ನಾಗರಿಕರು ಪ್ರತಿಭಟನೆಗೆ ಸಜ್ಜಾಗಿದ್ದು ಈ ಸಂಬಂಧ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯ ಪೂರ್ವಸಿದ್ಧತೆ ಇಂದು ಬೆಳಗ್ಗೆ ನಡೆಯಿತು. ಸಮಿತಿ ಅಧ್ಯಕ್ಷರಾದ ಕಮಾಂಡರ್ ವಿಜಯಕುಮಾರ್ ಮಾತನಾಡಿ ಕಾನೂನು ಉಲ್ಲಂಘಿಸಿದ ಫ್ಯಾಕ್ಟರಿಯಿಂದಾಗಿ ಪರಿಸರದ ನೀರು ಕಲುಷಿತವಾಗಿದೆ. ತ್ಯಾಜಯುಕ್ತ ಕಲುಷಿತ ನೀರು ಅಂತರ್ಗಾಮಿಯಾಗಿ ಹರಿದು ಇಡೀ ಕಣ್ವತೀರ್ಥ ಪರಿಸರದ ಜಲಾಶಯ ಸೇರಿಕೊಳ್ಳುತ್ತಿದೆ. ಕಳೆದ 7 ವರ್ಷಗಳೀಂದ ಈ ಕುರಿತು ದೂರಿದರೂ ಪ್ರಯೋಜನವಿಲ್ಲದೇ ಕಾರ್ಖಾನೆ ಮುಂದುವರಿಯುತ್ತದೆ. ಈ ಪರಿಸ್ಥಿತಿಗೆ ಮಂಜೇಶ್ವರ ಗ್ರಾ. ಪಂ. ನೇರಹೊಣೆಯಾಗಿದೆ. ಆದ್ದರಿಂತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ, ಅನ್ಯ ದಾರಿಯಿಲ್ಲದೇ ನಾಗರಿಕರು ಗ್ರಾ. ಪಂ.ಕಚೇರಿಗೆ ಪ್ರತಿಭಟನಾ ಮೇರವಣಿಗೆ ಮತ್ತು ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದರು. ನಾಗರಿಕ ಕ್ರಿಯಾ ಸಮಿತಿ ಮುಂದಾಳು ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ ಮೀನುಗಳು ಕಾರ್ಖಾನೆಯ ಕಲುಷಿತ ನೀರಿನಿಂದ ನಾಡಿಗೆ ಮಲಿನ ಜಲ ಹರಿದು ದುರ್ವಾಸನೆ ವ್ಯಾಪಕವಾಗಿದೆ. ಇದು ನಾಡಿನ ಜನತೆಯ ನಿದ್ದೆಗೆಡಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಬಂಧನೆ ಉಲ್ಲಂಘಿಸಿ ಕಾರ್ಯಾಚರಿಸುವ ಮೀನು ಸಂಸ್ಕರಣಾ ಘಟಕ ಕಾರ್ಯಾಚರಣೆಗೆ ಪಂಚಾಯತಿನ ಪೂರಕ ನಿಲುವೇ ಕಾರಣವೆಂದು ಆರೋಪಿಸಿದ ಅವರು
ನಾಗರಿಕರ ಪ್ರತಿಭಟನೆಯನ್ನು ಸ್ಥಳೀಯಾಡಳಿತ ನಿರ್ಲಕ್ಷಿಸುತ್ತಿದೆ ಎಂದರು.
ಗ್ರಾ. ಪಂ. ಸದಸ್ಯೆ ವಿನಯಾ ಭಾಸ್ಕರ್ ಈ ಸಮಸ್ಯೆಗೆ ಸಂಬಂಧಿಸಿ ಈ ಹಿಂದೆ ನಡೆದ ಬೆಳವಣಿಗೆಗಳ ಮಾಹಿತಿ ಇತ್ತರು. ನಾಗರಿಕ ಮುಖಂಡ ಮಧುಸೂಧನ ಆಚಾರ್ಯ, ಗ್ರಾ. ಪಂ. ಸದಸ್ಯ ಲಕ್ಷ್ಮಣ ಕುಚ್ಚಿಕ್ಕಾಡ್, ತಲಪಾಡಿ ದೇವಾಡಿಗ ಸಂಘದ ಅಧ್ಯಕ್ಷ ಜಯಂತ್ ಟಿ. ಪಿ. ಹೌಸ್, ಸುಕುಮಾರ್, ಸುನಿಲ್ ಡಿ' ಸೋಜ, ಬಾಲಕೃಷ್ಣ, ಪ್ರದೀಪ್ ಕುಮಾರ್, ಪುಷ್ಪಲತಾ, ಲತಾ ಸುಧಾಕರ ಮೊದಲಾದ ನಾಗರಿಕರಿದ್ದರು. ಡಾ. ಚಂದ್ರಹಾಸ ಕಣ್ವತೀರ್ಥ ಸ್ವಾಗತಿಸಿ, ಪ್ರವೀಣ್ ಕುಂಞಿಹಿತ್ತಿಲು ವಂದಿಸಿದರು.




