ಅಂಗನವಾಡಿ ಹೆಸರಲ್ಲಿ ರಾಜಕೀಯ ಕೆಸರೆರಚಾಟವನ್ನು ನಿಲ್ಲಿಸಿ. - ಫ್ಲೆಕ್ಸ್ ಪ್ರದರ್ಶಿಸಿ ಚಿಣ್ಣರಿಂದ ಗಾಢ ನಿದ್ರೆಯಲ್ಲಿರುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ವಿನೂತನ ಆಹ್ವಾನ
ನವೆಂಬರ್ 07, 2023
0
ಅಂಗನವಾಡಿ ಹೆಸರಲ್ಲಿ ರಾಜಕೀಯ ಕೆಸರೆರಚಾಟವನ್ನು ನಿಲ್ಲಿಸಿ. - ಫ್ಲೆಕ್ಸ್ ಪ್ರದರ್ಶಿಸಿ ಚಿಣ್ಣರಿಂದ ಗಾಢ ನಿದ್ರೆಯಲ್ಲಿರುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ವಿನೂತನ ಆಹ್ವಾನ.
ಮಂಜೇಶ್ವರ: ರಾಜಕೀಯದಲ್ಲಿ ಲಾಭವನ್ನು ಪಡೆಯಲು ಮುಂದಾಗಿರುವ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷಗಳ ನೇತಾರರ ಹಾಗೂ ಕಾರ್ಯಕರ್ತರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿಯ ಹೆಸರಿನಲ್ಲಿ ರಾಜಕೀಯ ಕೆಸರೆರಚಾಟವನ್ನು ಮುಂದುವರಿಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳ ನೇತಾರರು ಊರವರು ಸ್ವಂತವಾಗಿ ಖರೀದಿಸಿರುವ ಸ್ಥಳದಲ್ಲಿ ಅಂಗನವಾಡಿಯನ್ನು ನಿರ್ಮಿಸದೇ ಬಾಡಿಗೆ ಕೊಠಡಿಯಲ್ಲಿ ಚಿಣ್ಣರನ್ನು ಕೂರಿಸಿ ಆಗಾಗ ಬೆಕ್ಕು ತನ್ನ ಮರಿಯನ್ನು ಅಲ್ಲಲ್ಲಿ ಕೊಂಡು ಹೋಗುವ ರೀತಿಯಲ್ಲಿ ಚಿಣ್ಣರನ್ನು ಬೇರೆ ಬೇರೆ ಬಾಡಿಗೆ ಕೊಠಡಿಗಳಿಗಳಿಗೆ ಕೊಂಡೊಯ್ಯುತ್ತಿರುವುದಾಗಿ ಪೋಷಕರು ತಮ್ಮ ಅಸಮಧಾನವನ್ನು ವ್ಯಕ್ತ ಪಡಿಸಿದ್ದಾರೆ. ಇದೀಗ ರಾಜಕೀಯ ಕೆಸರೆರಚಾಟದ ವಿರುದ್ಧ ಒಂದಾಗಿರುವ ಪ್ರದೇಶವಾಸಿಗಳು 2023 ನವೆಂಬರ್ 8 ರಂದು ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ರಾಜಕೀಯ ಮರೆತು ಚಿಣ್ಣರನ್ನು ರಕ್ಷಿಸಲು ಭಾರೀ ಪ್ರತಿಭಟನೆಗೆ ಸಿದ್ಧತೆಯನ್ನು ನಡೆಸುತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬಿತ್ತಾಡಿ ಅಂಗನವಾಡಿಯ ಚಿಣ್ಣರು ನಿನ್ನೆ ಬಾಡಿಗೆ ಮನೆಯೊಂದರಲ್ಲಿ ಆರಂಭಗೊಂಡ ಅಂಗನವಾಡಿ ಎದುರು ನಮಗೆ ಅಂಗನವಾಡಿ ಬೇಕೇ ಬೇಕು ನಮ್ಮ ಭವಿಷ್ಯವನ್ನು ರಕ್ಷಿಸಿ ನಮ್ಮ ಹೋರಾಟದೊಂದಿಗೆ ಸಹಕರಿಸಿ ಮೊದಲಾದ ಮನಕರಗಿಸುವಂತಹ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆಯಲಿರುವ ಪ್ರತಿಭಟನೆಗೆ ಊರವರನ್ನು ಆಹ್ವಾನಿಸುವ ದೃಶ್ಯ ಕಂಡು ಬಂತು.
