ಜೈ ತುಲುನಾಡ್ (ರಿ.) ಕಾಸರಗೋಡು ವತಿಯಿಂದ, ನೀರ್ಚಾಲ್ ಮಹಾಜನ ಸಂಸ್ಕೃತ ಕಾಲೇಜ್ ನಲ್ಲಿ ತುಲು ಲಿಪಿಯನ್ನು ಲೋಕಕ್ಕೆ ತೋರಿಸಿಕೊಟ್ಟ ಡಾ||ಪುಂಡೂರು ವೆಂಕಟರಾಜ ಪುಣಿಂಚತ್ತಾಯೆರ ಜನ್ಮದಿನ ಆಚರಣೆ.
ಅಕ್ಟೋಬರ್ 11, 2023
0
ಜೈ ತುಲುನಾಡ್ (ರಿ.) ಕಾಸರಗೋಡು ವತಿಯಿಂದ, ನೀರ್ಚಾಲ್ ಮಹಾಜನ ಸಂಸ್ಕೃತ ಕಾಲೇಜ್ ನಲ್ಲಿ ತುಲು ಲಿಪಿಯನ್ನು ಲೋಕಕ್ಕೆ ತೋರಿಸಿಕೊಟ್ಟ ಡಾ||ಪುಂಡೂರು ವೆಂಕಟರಾಜ ಪುಣಿಂಚತ್ತಾಯೆರ ಜನ್ಮದಿನ ಆಚರಣೆ.
ಕಾಸರಗೋಡು: ತುಲು ಲಿಪಿ ಬ್ರಹ್ಮನೆಂದೇ ಖ್ಯಾತರಾದ, ತಾಡೆಯೋಲೆ, ಶಿಲಾಶಾಸನದಲ್ಲಿ ಮಾತ್ರ ಕಾಣುತಿದ್ದ ತುಲು ಲಿಪಿಯನ್ನು ಸಂಶೋಧನೆ ಮಾಡಿ ಜನ ಸಾಮಾನ್ಯರಿಗೂ ಸುಲಭವಾಗಿ ಕಲಿಯಬಹುದಾದ ತುಲು ಲಿಪಿಯನ್ನು ಲೋಕಕ್ಕೆ ತೋರಿಸಿಕೊಟ್ಟ ಡಾ||ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನ ವಿಶ್ವ ತುಲು ಲಿಪಿ ದಿನ ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ವತಿಯಿಂದ, ಪುಣಿಂಚತ್ತಾಯೆರು ಕಲಿತ ಶಾಲೆ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ಪೆರಡಾಲ ಇದರ ಸಹಯೋಗದೊಂದಿಗೆ ನಡೆಸಲಾಯಿತು. ಶಾಲೆಯ ವ್ಯವಸ್ಥಾಪಕರಾದ ಜಯದೇವ ಖಂಡಿಗೆಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಪುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯ್ಯಲಾಯಿತು. ನಂತರ ಅವರು ಮಾತನಾಡಿ "ಪುಣಿಂಚಿತ್ತಾಯರು ಇಲ್ಲಿ ವಿಧ್ಯಾಭ್ಯಾಸ ಮಾಡಿದವರೆಂಬುವುದೇ ನಮಗೆ ಹೆಮ್ಮೆ ಎನಿಸುತ್ತದೆ. ಅವರ ಜನ್ಮದಿನವನ್ನು ಇವತ್ತು ನಮ್ಮ ಶಾಲೆಯಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯವರು ಆಚರಿಸುತ್ತಿರುವುದು ಸಂತೋಷ ತಂದಿದೆ." ಎಂದು ಶ್ಲಾಘಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ್ ಎಂ.ಕೆರವರು ಮುಖ್ಯ ಅತಿಥಿಯಾಗಿ "ಪುವೆಂಪು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎಂಬುದೇ ನಮಗೆ ಹೆಮ್ಮೆ ಎನಿಸುತ್ತದೆ, ನಮ್ಮ ಶಾಲೆಯಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಪುವೆಂಪುರವರ ಬಗ್ಗೆ ಬಹಳಷ್ಟು ತಿಳಿಯುವಂತೆ ಮಾಡಿರುವ ಜೈ ತುಲನಾಡ್ (ರಿ.) ಸಂಘಟನೆಗೆ ಶುಭವಾಗಲಿ, ನಮ್ಮ ಶಾಲೆಯಲ್ಲಿಯೂ ತುಲು ಭಾಷೆ, ತುಲು ಲಿಪಿ ಕಲಿಸುವಂತಾಗಲಿ ಎಂದು ಶುಭಹಾರೈಸಿದರು. ಅತಿಥಿಗಳಾದ ಕಿರಣ್ ತುಲುವೆ, ಕಾರ್ಯದರ್ಶಿ ಜೈ ತುಲುನಾಡ್ (ರಿ.) ಇವರು ಸಂಘಟನೆಯ ಧ್ಯೇಯೋದ್ದೇಶದ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಪುವೆಂಪುರವರ ಪುತ್ರ ವಿಜಯರಾಜ ಪುಣಿಂಚತ್ತಾಯರು ತಂದೆಯವರ ಸಾಧನೆಗೆ ದಾರಿ ದೀಪವಾದ ಅವರ ಗುರುಗಳಾದ ಖಂಡಿಗೆ ಶ್ಯಾಮ ಭಟ್ ರವರನ್ನು ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೂ ಪುವೆಂಪುರವರ ಸಾಹಿತ್ಯ, ಬರಹಗಳ ಬಗ್ಗೆ ತಿಳಿಸಿದರು.
ಜೈ ತುಲುನಾಡ್ (ರಿ.) ಸಂಘಟನೆ ಉಪಾಧ್ಯಕ್ಷರುಗಳಾದ ಉಮೇಶ್ ಸಾಲಿಯಾನ್ ಸಿರಿಯಾ, ಉದಯ್ ಪೂಂಜಾ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಎ ಶ್ರೀನಾಥ್ ರವರುಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಪುವೆಂಪು ನಡೆದುಬಂದ ದಾರಿ ಮತ್ತು ಸಾಧನೆ ಬಗ್ಗೆ ಶಾಲೆಯ ಅಧ್ಯಾಪಿಕೆ ಶ್ರೀಮತಿ ಡಾ/ ವಿಧ್ಯಾ ಲಕ್ಷ್ಮಿಯವರು ತಿಳಿಸಿದರು. ಕುಮಾರಿ ಅನ್ವಿತ ಮತ್ತು ಶ್ರೀಮತಿ ಶೈಲಜಾ ಟೀಚರ್ ಪುವೆಂಪು ರಚಿಸಿದ ಗೀತೆಯನ್ನು ಹಾಡಿದರು. ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ಅಧ್ಯಕ್ಷರಾದ ಶ್ರೀಮತಿ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥರವರು ಅಧ್ಯಕ್ಷತೆಯನ್ನು ವಹಿಸಿ ಪುವೆಂಪುರವರ ಇನ್ನೂ ಮುದ್ರಿಣಗೊಳ್ಳದೆ ಉಳಿದಿರುವ ಲೇಖನಗಳನ್ನು ಸರಕಾರವು ಸಾಹಿತ್ಯ ಅಕಾಡೆಮಿಗಳ ಮುಖಾಂತರ ಮುದ್ರಿಸಿ ಅವರ ಅಮೂಲ್ಯ ಜ್ಞಾನ ಸಂಪತ್ತನ್ನು ಎಲ್ಲರೂ ತಿಳಿಯುವಂತೆ ಆಗಬೇಕು, ಅವರ ಮುದ್ರಿತ ಕೃತಿಗಳು ಮರು ಮುದ್ರಣ ಆಗಬೇಕಿದೆ ಎಂದರು. ಕಾರ್ಯಕ್ರಮವನ್ನು ಶಾಲಾ ಮಕ್ಕಳ ಪ್ರಾರ್ಥನೆ ಯೊಂದಿಗೆ ಆರಂಭಿಸಿ, ಶ್ರೀನಿವಾಸ ಆಳ್ವ ಉಪಾಧ್ಯಕ್ಷರು ಜೈ ತುಲುನಾಡ್ (ರಿ.) ಕಾಸರಗೋಡು ಇವರು ಸ್ವಾಗತಿಸಿ, ಕೋಶಾಧಿಕಾರಿಗಳಾದ ಉತ್ತಮ್ ಯು ವಂದನಾರ್ಪಣೆ ಗೈದರು. ಈ ಸಂದರ್ಭದಲ್ಲಿ ಮಹಾಜನ ಕಾಲೇಜಿನ ವ್ಯವಸ್ಥಾಪಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ತುಲು ಲಿಪಿ ಕಲಿಕಾ ಕಾರ್ಯಾಗಾರವನ್ನು ನಡೆಸಲು ಅನುಮತಿಯನ್ನು ಕೋರಿ ಮನವಿ ಸಲ್ಲಿಸಲಾಯಿತು.ಶಾಲಾ ಅಧ್ಯಾಪಿಕೆ ಶ್ರೀಮತಿ ಶೈಲಜಾ ರವರು ಕಾರ್ಯಕ್ರಮ ನಿರೂಪಿಸಿದರು, ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ಕಾರ್ಯದರ್ಶಿ ಜಗನ್ನಾಥ ಬದಿಯಡ್ಕ, ಪದಾಧಿಕಾರಿಗಳಾದ ಹರಿಕಾಂತ ಸಾಲಿಯಾನ್ ಕಾಸರಗೋಡು, ವಿನೋದ ಪ್ರಸಾದ್ ರೈ, ಪವಿತ್ರ ಮಾಡ, ನಿರ್ಮಲ ಖಂಡಿಗೆ ಸಹಕರಿಸಿದರು.





