ಮಂಜೇಶ್ವರ: ರೈತರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಭಿಪ್ರಾಯಪಟ್ಟರು.
ಪೈವಳಿಕೆ ಕಾಯರ್‌ಕಟ್ಟೆ ಕುಲಾಲ ಸಮಾಜ ಮಂದಿರದಲ್ಲಿ ಇಂದು (17-11-2026) ಬೆಳಗ್ಗೆ ನಡೆದ ಸೆಂಟ್ರಲ್ ಅರೆಕಾನಟ್ ಆ್ಯಂಡ್ ಕೊಕ್ಕೊ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ) ಬಾಯಾರು ಘಟಕದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ನಮ್ಮ ಕೃಷಿ ಭೂಮಿಯನ್ನು ಮುಂದಿನ ಪೀಳಿಗೆಗೆ ಉತ್ತಮ ರೀತಿಯಲ್ಲಿ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಸುಸ್ಥಿರ ಕೃಷಿ ಮಾಡಬೇಕಾದದ್ದು ಇಂದಿನ ಕಾಲದ ಅತ್ಯಂತ ಅಗತ್ಯವಾಗಿದೆ," ಎಂದು ಕರೆ ನೀಡಿದರು.
ಸಭೆಯ ಆರಂಭದಲ್ಲಿ ಕ್ಯಾಂಪ್ಕೋ ಸ್ಥಾಪಕರಾದ ವಾರಣಾಸಿ ಸುಬ್ರಾಯ ಭಟ್ ಹಾಗೂ ಭಾರತಾಂಬೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಹಿರಿಯ ಸದಸ್ಯರಾದ ಪೂವಪ್ಪ ಮೂಲ್ಯ ಮುನ್ನಿಪ್ಪಾಡಿ, ಮೋಕ್ಷದ ಬಿ. ಶೆಟ್ಟಿ ಕುಬನೂರು, ಚಂದ್ರಶೇಖರ ಚೌಟ ಮೀಯಪದವು, ಸುಬ್ಬಣ್ಣ ಭಟ್ ಅಡ್ಕತ್ತಿಮಾರ್, ಶಶಿಕಾಂತ ಬಲ್ಲಾಳ್ ಚಿಪ್ಪಾರ್ ಹಾಗೂ ಅಶೋಕ್ ಕುಮಾರ್ ಹೊಳ್ಳ ಕುಬನೂರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೈದ್ಯಕೀಯ ನೆರವು ವಿತರಣೆ:
ಇದೇ ಸಂದರ್ಭದಲ್ಲಿ ಕ್ಯಾಂಪ್ಕೋ ಆಡಳಿತ ಮಂಡಳಿ ವತಿಯಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪೈವಳಿಕೆ ಕುದ್ರೆಕ್ಕೋಡು ನಿವಾಸಿ ವಾಸುದೇವ ಹೊಳ್ಳ ಅವರಿಗೆ 50,000 ರೂ. ಮೊತ್ತದ ಚೆಕ್ ಹಾಗೂ ಕಿಡ್ನಿ ಸಂಬಂಧಿತ ಡಯಾಲಿಸಿಸ್ ಚಿಕಿತ್ಸೆಗಾಗಿ ಜೀವನ್ ಸಂತೋಷ್ ಕ್ರಾಸ್ತಾ ಅವರಿಗೆ 5,149 ರೂ. ಆರ್ಥಿಕ ನೆರವನ್ನು ವೇದಿಕೆಯಲ್ಲಿ ವಿತರಿಸಲಾಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಸಂಸ್ಥೆಯ ವೈದ್ಯಕೀಯ ಹಾಗೂ ಇತರ ಸೌಲಭ್ಯಗಳ ಬಗ್ಗೆ ವಿವರಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎನ್.ಆರ್. ವೈಜ್ಞಾನಿಕ ಕೃಷಿ ಪದ್ಧತಿ, ಗೊಬ್ಬರ ಹಾಗೂ ಮೈಲುತುತ್ತು ಬಳಕೆಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಂಗಳೂರು ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ಆಡಳಿತ ಮಂಡಳಿ ನಿರ್ದೇಶಕರಾದ ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ ಕೆ., ಪುರುಷೋತ್ತಮ್ ಭಟ್ ಎಂ., ವೆಂಕಟ್ರಮಣ ಭಟ್ ವೈ., ವಿವೇಕಾನಂದ ಗೌಡ ಪಿ., ಸದಾನಂದ ಶೆಟ್ಟಿ ಕೆ., ಗಣೇಶ್ ಪಾರೆಕಟ್ಟೆ, ಸೌಮ್ಯ ಪ್ರಕಾಶ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.