Breaking Posts

6/trending/recent
Type Here to Get Search Results !

8:10:45

ವರ್ಕಾಡಿ ಸಾರ್ವಜನಿಕ ಸ್ಮಶಾನ ವಿಚಾರ: ಬಿಜೆಪಿ ವಾಪಸ್ ಚಲೋ ಮಾಡಲಿ – ಕಾಂಗ್ರೆಸ್ ಲೇವಡಿ.

ವರ್ಕಾಡಿ ಸಾರ್ವಜನಿಕ ಸ್ಮಶಾನ ವಿಚಾರ: ಬಿಜೆಪಿ ವಾಪಸ್ ಚಲೋ ಮಾಡಲಿ – ಕಾಂಗ್ರೆಸ್ ಲೇವಡಿ.
ವರ್ಕಾಡಿ: ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಮುರತ್ತಣೆ ಸಾರ್ವಜನಿಕ ಸ್ಮಶಾನವನ್ನು ಪಂಚಾಯತ್‌ನ ಏಕೈಕ ಹಿಂದೂ ರುದ್ರಭೂಮಿ ಎಂದು ದುರುದ್ದೇಶಪೂರ್ವಕವಾಗಿ ಬಿಂಬಿಸಿ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಬಿಜೆಪಿ ಘೋಷಿಸಿರುವುದು ರಾಜಕೀಯ ಪ್ರಚಾರದ ಹತಾಶ ಪ್ರಯತ್ನ ಎಂದು ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅರಿಬೈಲ್ ತಿಳಿಸಿದ್ದಾರೆ.
ಯುಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ, ತಾವು ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲೇ ಮುರತ್ತಣೆ ಸಾರ್ವಜನಿಕ ಸ್ಮಶಾನದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಅದು ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕಳೆದ ಐದು ವರ್ಷಗಳ ಬಿಜೆಪಿ ಬೆಂಬಲಿತ ಆಡಳಿತದ ಅವಧಿಯಲ್ಲಿ ಈ ಸ್ಮಶಾನ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ, ದುಸ್ಥಿತಿಗೆ ತಲುಪಿ ಬಳಕೆಗೆ ಅಸಾಧ್ಯವಾಗಿತ್ತು.
  ಕಳೆದ ಆಡಳಿತ ಮಂಡಳಿಯಲ್ಲಿದ್ದ ಆ ವಾರ್ಡ್‌ನ ಪ್ರತಿನಿಧಿಯಾಗಿದ್ದ ರಾಜಕುಮಾರ್ ಶೆಟ್ಟಿ ಸೇರಿದಂತೆ ಐವರು ಬಿಜೆಪಿ ಸದಸ್ಯರು ಸ್ಮಶಾನದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಮೀಸಲಿಡಲಿಲ್ಲ. ಕಳೆದ ಅವಧಿಯಲ್ಲಿ ಆ ಭಾಗದ ಬ್ಲಾಕ್ ಪಂಚಾಯತ್ ಸದಸ್ಯೆಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಆಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಐದು ವರ್ಷಗಳ ಕಾಲ ಸಂಪೂರ್ಣ ಮೌನವಾಗಿದ್ದ ಬಿಜೆಪಿ ಈಗ ಮಾತ್ರ ಸಾರ್ವಜನಿಕರ ಬಗ್ಗೆ ಕಾಳಜಿ ತೋರಿಸುತ್ತಿರುವಂತೆ ವರ್ತಿಸುತ್ತಿರುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. 2025 ಡಿಸೆಂಬರ್ ಕೊನೆಯ ವಾರದಲ್ಲಿ
ಯುಡಿಎಫ್ ಅಧಿಕಾರಕ್ಕೆ ಬಂದ ನಂತರ ಪಂಚಾಯತ್ ಅಧ್ಯಕ್ಷ ಶ್ರೀ ಉಮ್ಮರ್ ಬೋರ್ಕಳ ಅವರ ನೇತೃತ್ವದಲ್ಲಿ ಯೋಜನೆ ಪರಿಷ್ಕರಣೆ ವೇಳೆ ಮುರತ್ತಣೆ ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ₹4 ಲಕ್ಷ ಹಾಗೂ ಮೃತದೇಹಗಳ ಶುಚೀಕರಣಕ್ಕಾಗಿ ಕಫಿನ್ ಟೆಂಟ್ ಮತ್ತು ಬಾತಿಂಗ್ ಟೇಬಲ್ ಖರೀದಿಗೆ ₹2 ಲಕ್ಷ ಮೀಸಲಿರಿಸಿ ಜಿಲ್ಲಾ ಯೋಜನಾ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. 
ಈ ವಿಷಯ ಬಿಜೆಪಿ ಪಂಚಾಯತ್ ಸದಸ್ಯರಿಗೆ ಹಾಗೂ ಪಕ್ಷದ ನಾಯಕರಿಗೂ ಅಧಿಕೃತವಾಗಿ ತಿಳಿಸಲಾಗಿದೆ.
ಈ ಯೋಜನೆಗಳನ್ನು ಶೀಘ್ರ ಜಾರಿಗೆ ತರಲು ಪಂಚಾಯತ್ ಆಡಳಿತ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುತ್ತಿರುವುದು ಗೊತ್ತಿದ್ದರೂ, ತಾವು ನಡೆಸುವ ಪ್ರತಿಭಟನೆಯಿಂದಲೇ ಅಭಿವೃದ್ಧಿ ಸಾಧ್ಯವಾಯಿತು ಎಂಬ ಸುಳ್ಳು ಚಿತ್ರಣವನ್ನು ಜನರ ಮುಂದೆ ಕಟ್ಟಿಕೊಡಲು ಬಿಜೆಪಿ ಈ ನಾಟಕೀಯ ಪ್ರತಿಭಟನೆ ಆಯೋಜಿಸಿದೆ.
ಐದು ವರ್ಷಗಳ ಕಾಲ ಸ್ಮಶಾನವನ್ನು ಸಂಪೂರ್ಣ ನಿರ್ಲಕ್ಷಿಸಿದವರು ಇಂದು ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಜನರಿಗೆ ಆಶ್ಚರ್ಯ ತಂದಿದೆ. ಅಭಿವೃದ್ಧಿ ಕಾರ್ಯಗಳು ತಮ್ಮಿಂದ ಸಾಧ್ಯವಿಲ್ಲ, ಯುಡಿಎಫ್ ನಿಂದ ಮಾತ್ರ ಸಾಧ್ಯ ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಂಡು ಮೆರವಣಿಗೆ ನಡೆಸುವುದು ಸಂತೋಷದ ವಿಚಾರ. 
ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕಳೆದುಕೊಂಡ ರಾಜಕೀಯ ನೆಲೆ ಮರಳಿ ಪಡೆಯುವ ಪ್ರಯತ್ನವನ್ನು ಜನತೆ ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ.
ಆದ್ದರಿಂದ ಅನಗತ್ಯ ಪ್ರತಿಭಟನೆಗಳನ್ನು ನಡೆಸುವ ಬದಲು, ತಮ್ಮ ಆಡಳಿತದ ವೈಫಲ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಬಿಜೆಪಿಗೆ ಹೆಚ್ಚು ಸೂಕ್ತ. ಜನತೆಯ ಎದುರು ಸತ್ಯವನ್ನು ಒಪ್ಪಿಕೊಂಡು "ವಾಪಸ್ ಚಲೋ" ಕಾರ್ಯಕ್ರಮ ನಡೆಸುವುದೇ ಬಿಜೆಪಿಗೆ ಉಳಿದಿರುವ ಗೌರವಯುತ ಮಾರ್ಗ ಎಂದು ಶ್ರೀ ಪುರುಷೋತ್ತಮ ಅರಿಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.