Breaking Posts

6/trending/recent
Type Here to Get Search Results !

8:10:45

ವಿಶ್ವ ಜನಸಂಖ್ಯಾ ದಿನ ಮಂಜೇಶ್ವರದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ.

ವಿಶ್ವ ಜನಸಂಖ್ಯಾ ದಿನ ಮಂಜೇಶ್ವರದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ.  

ಮಂಜೇಶ್ವರ: ವಿಶ್ವ ಜನಸಂಖ್ಯಾ ದಿನದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ.ಸೈಫುಲ್ಲ ತಂಗಳ್ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌.ಸಿ.ಎಚ್ ಅಧಿಕಾರಿ ಡಾ. ಸಂತೋಷ್.ಬಿ.ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಎಂ.ಸಿ.ಎಚ್ ಅಧಿಕಾರಿ ಸ್ಟೆಲ್ಲಾ ಜೋಸೆಫ್ ಶುಭಾಶಯಗಳನ್ನು ತಿಳಿಸಿದರು. ಡೆಪ್ಯುಟಿ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಪಿ.ಪಿ. ಹಸೀಬ್ ಸ್ವಾಗತಿಸಿದರು ಮತ್ತು ಮಂಜೇಶ್ವರ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕಿ ವಿಮಲಾ ಧನ್ಯವಾದಗಳನ್ನು ಸಲ್ಲಿಸಿದರು. ನಂತರ ನಡೆದ ಜಾಗೃತಿ ಸೆಮಿನಾರಿನಲ್ಲಿ ಮಂಜೇಶ್ವರ ಬ್ಲೋಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ತರಗತಿ ನಡೆಸಿದರು. ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್, ಗೋವಿಂದ ಪೈ ಮೆಮೋರಿಯಲ್ ಸರ್ಕಾರಿ ಕಾಲೇಜಿನ ಮಹಿಳಾ ಸೆಲ್ ಹಾಗೂ ಎನ್‌.ಎಸ್‌.ಎಸ್ ಘಟಕ ಇವುಗಳ ಸಂಯುಕ್ತ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆ 500 ಕೋಟಿಗೆ ತಲುಪಿತು. ಇದರ ಹಿನ್ನೆಲೆಯಾಗಿ 1989 ರಿಂದ ಜನಸಂಖ್ಯಾ ಏರಿಕೆಯಿಂದ ಉಂಟಾಗುವ ಸವಾಲುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆಯ ದೇಶವಾಗಿ ಭಾರತ ಹೊರಹೊಮ್ಮಿದೆ. ಸುಮಾರು 146 ಕೋಟಿ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ದೇಶದ ಒಟ್ಟು ಸಂತಾನೋತ್ಪತ್ತಿ ಪ್ರಮಾಣ (Total Fertility Rate) 2022ರಲ್ಲಿ 2ಕ್ಕೆ ಸಮೀಪಿಸಿರುವುದು ದೇಶವು ಶೀಘ್ರದಲ್ಲೇ ಜನಸಂಖ್ಯಾ ಸ್ಥಿರತೆಯನ್ನು ಸಾಧಿಸುವ ಸೂಚನೆಯಾಗಿದೆ. 2026 ರ ವಿಶ್ವ ಜನಸಂಖ್ಯಾ ದಿನದ ವಿಷಯ ‘ಪ್ರಸವಗಳ ನಡುವೆ ಸಮರ್ಪಕ ಅಂತರವು ತಾಯಿ ಮತ್ತು ಶಿಶುವಿನ ಆರೋಗ್ಯ ಹಾಗೂ ಕಲ್ಯಾಣಕ್ಕೆ ಅಗತ್ಯ’ ಎಂಬುದಾಗಿದೆ. ಇತರ ರಾಜ್ಯಗಳಿಗಿಂತ ಕಡಿಮೆ ಇದ್ದರೂ ಕೇರಳದಲ್ಲಿಯೂ 15 ರಿಂದ 19 ವರ್ಷ ವಯಸ್ಸಿನ ಹುಡುಗಿಯರ ಪ್ರಸವಗಳು ವರದಿಯಾಗುತ್ತಿವೆ. ಅನಗತ್ಯ ಗರ್ಭಧಾರಣೆಯಿಂದಾಗುವ ಗರ್ಭಪಾತಗಳ ಪ್ರಮಾಣವೂ ಹೆಚ್ಚುತ್ತಿದೆ. ಪ್ರತಿಯುತ್ಪಾದಕ ಆರೋಗ್ಯದ ಬಗ್ಗೆ ಮತ್ತು ಅನಿಚ್ಛಿತ ಹಾಗೂ ಅನಾವಶ್ಯಕ ಗರ್ಭಧಾರಣೆಯನ್ನು ತಡೆಯುವ ಬಗ್ಗೆ ಜಾಗೃತಿ ಮುಂದುವರಿಸುವ ಅಗತ್ಯವಿದೆ ಎಂಬುದನ್ನು ಈ ಪರಿಸ್ಥಿತಿ ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ (ಆರೋಗ್ಯ) ಡಾ. ರೇಖಾ ಕೆ.ಟಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.