ಶ್ರೀ ವಾಣಿ ವಿಜಯ ಹೈ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಹಪಾಠಿ - ರಜತ ಸಂಭ್ರಮ
ಮಂಜೇಶ್ವರ: ಶ್ರೀ ವಾಣಿ ವಿಜಯ ಹೈ ಸ್ಕೂಲ್, ಕೊಡ್ಲಮೊಗರು, ಮಂಜೇಶ್ವರದ 2000–2001ನೇ ಸಾಲಿನ ವಿದ್ಯಾರ್ಥಿಗಳ ಸಹಪಾಠಿ ಸಂಗಮ ಹಾಗೂ ರಜತ ಸಂಭ್ರಮವು ಮೇ 10ರಂದು ಶಾಲೆಯ ವಠಾರದಲ್ಲಿ ನೆರವೇರಿತು. ಸುಮಾರು 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ಪ್ರಸ್ತುತ ಈ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿಯೂ, ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಂದೀಪ್ ಆರ್ ಬಳ್ಳಾಲ್ ಅವರ ಸುಮಧುರ ಕಂಠದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಅಗಲಿರುವ ಶಿಕ್ಷಕರಾದ ಗಣಪತಿ ಭಟ್ ಸರ್, ನಾಗಪ್ಪ ಸರ್ ಹಾಗೂ ಸಹಪಾಠಿಗಳನ್ನು ಮೌನ ಪ್ರಾರ್ಥನೆಯ ಮೂಲಕ ಸ್ಮರಿಸಲಾಯಿತು.
ನಂತರ ಎಲ್ಲರೂ ತಮ್ಮ ಬಾಲ್ಯದ ಸವಿನೆನಪುಗಳನ್ನು ಹಾಗೂ ಸಾಧನೆಯ ಹಾದಿಯ ಕೆಲವು ಕ್ಷಣಗಳನ್ನು ಪರಸ್ಪರ ಹಂಚಿಕೊಂಡರು.
ತಮ್ಮ ಶಾಲಾ ಜೀವನದ ಸುಂದರ ಕ್ಷಣಗಳನ್ನು ನೆನಪಿಸಲು ಆ ಕಾಲದ ಕೆಲವು ತಿಂಡಿ-ತಿನಿಸುಗಳ ಸವಿಯನ್ನು ಅನುಭವಿಸಿದರು.
ಜೊತೆಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮಾತು, ಹರಟೆ ಹಾಗೂ ನಗುವಿನಿಂದ ಕಂಗೊಳಿಸಿದ ಈ ಸುಂದರ ಕಾರ್ಯಕ್ರಮವು ಸರಿದ ಬಾಲ್ಯವನ್ನು ಮತ್ತೊಮ್ಮೆ ನೆನಪಿಸುವ ಮೂಲಕ ಆತ್ಮೀಯ ಬಾಂಧವ್ಯಕ್ಕೆ ಸಾಕ್ಷಿಯಾಯಿತು.