ಕುಂಬಳೆ: ಕೇರಳದಲ್ಲಿ ಸಾಂಪ್ರದಾಯಿಕ ಎಡ ಮತ್ತು ಬಲ ರಾಜಕೀಯ ರಂಗಗಳ ಮೇಲಿನ ವಿಶ್ವಾಸ ಕುಸಿದ ಹಿನ್ನೆಲೆಯಲ್ಲಿ, ಪರಿಸರ ಮತ್ತು ಆರ್‌ಟಿಐ ಕಾರ್ಯಕರ್ತ ಕೇಶವ ನಾಯಕ್ ಹೊಸ ರಾಜಕೀಯ ಪ್ರಯತ್ನದ ಸುಳಿವು ನೀಡಿದ್ದಾರೆ.
ಮಂಜೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಹಾಗೂ ಅವೈಜ್ಞಾನಿಕ ಗಣಿಗಾರಿಕೆ, ಕೆಂಪುಕಲ್ಲು, ಮಣ್ಣು ಮತ್ತು ಮರದ ಕಳ್ಳಸಾಗಣೆ ವಿರುದ್ಧ 1994ರಿಂದ ನಿರಂತರ ಹೋರಾಟ ನಡೆಸುತ್ತಿರುವ ಅವರು, ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿದರು. ಜನಪ್ರತಿನಿಧಿಗಳು ಮತ್ತು ಸರ್ಕಾರದಿಂದ ಸಹ ಸೂಕ್ತ ಕ್ರಮವಾಗದಿರುವುದರಿಂದ ಜನರಲ್ಲಿ ನಿರಾಶೆ ಮೂಡಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಂತರ ಅವರು ತಮ್ಮ ಉಮೇದ್ವಾರಿಕೆಯನ್ನು ಹಿಂಪಡೆದು, ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಅವರಿಗೆ ಬೆಂಬಲ ಘೋಷಿಸಿದರು. ಸುರೇಂದ್ರನ್ ಅವರ ಗೆಲುವಿಗಾಗಿ ಸಕ್ರಿಯವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.
ಅಧಿಕಾರಿಗಳು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಈ ಬಾರಿ ಸ್ವತಂತ್ರರಾಗಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ ಸ್ವತಂತ್ರ ರಂಗ ರಚಿಸಿ, ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಶೋಷಣೆಯ ವಿರುದ್ಧ ಸಕ್ರಿಯ ಹೋರಾಟ ನಡೆಸಲಿದೆ ಎಂದು ಹೇಳಿದರು.