ದೇಶದ ಜನತೆಗೆ ಓಣಂ ಸಂದರ್ಭ ಕೇಂದ್ರದ ಬಂಪರ್ ಕೊಡುಗೆ. ಎಲ್. ಪಿ. ಜಿ ಸಿಲಿಂಡರ್ ಬೆಲೆ 200 ರೂಪಾಯಿ ಕಡಿತ.
ಆಗಸ್ಟ್ 29, 2023
0
ದೇಶದ ಜನತೆಗೆ ಓಣಂ ಸಂದರ್ಭ ಕೇಂದ್ರದ ಬಂಪರ್ ಕೊಡುಗೆ. ಎಲ್. ಪಿ. ಜಿ ಸಿಲಿಂಡರ್ ಬೆಲೆ 200 ರೂಪಾಯಿ ಕಡಿತ.
ನವದೆಹಲಿ: ಎಲ್.ಪಿ.ಜಿ ಸಿಲಿಂಡರ್ಗಳ ಬೆಲೆ 200 ರೂನಷ್ಟು ಕಡಿಮೆ ಆಗಲಿದೆ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ (LPG Cylinder Price) 200 ರೂನಷ್ಟು ಸಬ್ಸಿಡಿ ಒದಗಿಸಲು ಕೇಂದ್ರ ಸಂಪುಟ (Union Cabinet) ಇಂದು ಅನುಮೋದನೆ ನೀಡಿದೆ. ಇದು ಓಣಂ ಹಬ್ಬದ ಸಂದರ್ಭ ಕೇಂದ್ರ ಸರಕಾರ ನೀಡಿದ ಬಂಪರ್ ಕೊಡುಗೆಯಾಗಿದೆ. ಸದ್ಯ 14 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,100 ರೂ ಅಸುಪಾಸಿನಲ್ಲಿ ಇದೆ. ಇದರ ಬೆಲೆ ಸಾವಿರ ರೂ ಒಳಗೆ ಇರಲಿದೆ ಎನ್ನಲಾಗಿದೆ. ಪಿಎಂ ಉಜ್ವಲ ಯೋಜನೆಯ (PM Ujjwal Yojana) ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬೆಲೆ ಇಳಿಕೆ ಸೌಲಭ್ಯ ಸಿಗಲಿದೆ. ಗ್ಯಾಸ್ ಬೆಲೆ ಕಡಿಮೆ ಆಗಿರುವ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಿರುವ ವರದಿ ಪ್ರಕಾರ ಉಜ್ವಲ ಯೋಜನೆ ಅಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 200 ರೂ ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. ಇದರೊಂದಿಗೆ, ಈ ಸ್ಕೀಮ್ನಲ್ಲಿ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ ನೀಡಲಾಗುವ ಒಟ್ಟು ಸಬ್ಸಿಡಿ 400 ರೂ ಆಗುತ್ತದೆ. ಸಬ್ಸಿಡಿ ರಹಿತ 14 ಕಿಲೋ ಎಲ್ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ 1,105.50 ರೂ ಇದೆ. ಕೋಲ್ಕತಾದಲ್ಲಿ 1,118.50 ರೂ ಇದೆ. ಚೆನ್ನೈನಲ್ಲಿ 1,102.50 ರೂ ಇದೆ.ಮೇ ತಿಂಗಳಿಂದೀಚೆ ಐಒಸಿ, ಭಾರತ್ ಪೆಟ್ರೋಲಿಯಂ ಮೊದಲಾದ ತೈಲ ಮಾರುಕಟ್ಟೆ ಕಂಪನಿಗಳು ಮೂರು ಬಾರಿ ಎಲ್ಪಿಜಿ ದರಗಳನ್ನು ಏರಿಸಿವೆ. ಜುಲೈ ತಿಂಗಳಲ್ಲಿ 50 ರೂ ಹೆಚ್ಚಳವಾಗಿತ್ತು. ಈಗ ಉಜ್ವಲ ಸ್ಕೀಮ್ ಅಡಿಯಲ್ಲಿ ಸರ್ಕಾರ 200 ರೂ ಸಬ್ಸಿಡಿ ಘೋಷಿಸಿದೆ. ಕೇಂದ್ರ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಸ್ಕೀಮ್ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು 200 ರೂನಷ್ಟು ಇಳಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆ 2016ರಲ್ಲಿ ಶುರುವಾಗಿದ್ದು, ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಎಲ್ಪಿಜಿ ಕನೆಕ್ಷನ್ ಕೊಡುವ ಉದ್ದೇಶ ಹೊಂದಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರ ಫಲಾನುಭವಿಗಳಾಗಬಹುದು. 5 ಕೋಟಿ ಎಲ್ಪಿಜಿ ಸಂಪರ್ಕ ಕೊಡುವ ಗುರಿ ಇಡಲಾಗಿದೆ. ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಬಹುತೇಕ ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್ ಬಳಕೆ ಆಗುತ್ತದೆ. ಕರ್ನಾಟಕ, ದೆಹಲಿ, ಗೋವಾ, ತೆಲಂಗಾಣ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಮನೆಗಳು ಅಡುಗೆಗೆ ಎಲ್ಪಿಜಿ ಬಳಸುವುದುಂಟು.
